ಕೇಂದ್ರೀಯ ಬ್ಯಾಂಕು

ಒಂದು ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇಂದ್ರಸ್ಥಾನದಲ್ಲಿರುವ ಎಂದರೆ ಸರ್ಕಾರಕ್ಕೂ ಇತರ ಬ್ಯಾಂಕುಗಳಿಗೂ ಬ್ಯಾಂಕಾಗಿರುವ, ದೇಶದ ನಾಣ್ಯ ಚಲಾವಣೆ ಮತ್ತು ಉದ್ದರಿ ನೀತಿಯನ್ನು ನಿರ್ವಹಿಸುವ, ಹಣ ಮತ್ತು ಅಮೂಲ್ಯ ಲೋಹಗಳ ಆಯಾತ ನಿರ್ಯಾತಗಳನ್ನು ನಿಯಂತ್ರಿಸುವ ಕಾರ್ಯಭಾರ ಪ್ರವೃತ್ತವಾದ ಬ್ಯಾಂಕು (ಸೆಂಟ್ರಲ್ ಬ್ಯಾಂಕ್). ದೇಶದ ಆರ್ಥಿಕ ಸ್ಥಿರತೆ ಸಾಧಿಸಿ, ಸೂಕ್ತವಾದ ರೀತಿಯಲ್ಲಿ ಅದರ ಆರ್ಥಿಕ ಬೆಳವಣಿಗೆ ಆಗುವಂತೆ ನೋಡಿಕೊಳ್ಳುವುದು ಕೇಂದ್ರೀಯ ಬ್ಯಾಂಕಿನ ಕರ್ತವ್ಯ. ದೇಶದ ಸಂಪನ್ಮೂಲಗಳೂ ಧನಸಾಧನಗಳೂ ರಾಷ್ಟ್ರೋದ್ದೇಶಕ್ಕೆ ಒದಗಿಬರುವಂತೆ ಇದು ತನ್ನ ವ್ಯಾಪ್ತಿಗೆ ಒಳಪಟ್ಟ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕಾಗುತ್ತದೆ. ಈ ಗುರಿಗಳನ್ನು ಸಾಧಿಸುವ ಸಲುವಾಗಿ ಅದರ ಬತ್ತಳಿಕೆಯಲ್ಲಿರುವ ಬಾಣಗಳು ಅನೇಕ.
ವಿಕಾಸ : ಆಧುನಿಕ ಕೇಂದ್ರೀಯ ಬ್ಯಾಂಕು ದೀರ್ಘಕಾಲದಲ್ಲಿ ವಿಕಾಸಗೊಂಡಿರುವ ಒಂದು ವ್ಯವಸ್ಥೆ. ಐತಿಹಾಸಿಕವಾಗಿ ಇದರ ಬೆಳವಣಿಗೆಯನ್ನು ಬ್ಯಾಂಕ್ ಆಫ್ ಇಂಗ್ಲೆಂಡಿನ ಸ್ಥಾಪನೆಯ ಕಾಲದಿಂದ (1694) ಗುರುತಿಸಬಹುದು. ಅಂದಿನಿಂದ ಇಂದಿನವರೆಗೆ ವಿಶ್ವದ ಹಲವಾರು ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳ ಅಧಿಕಾರ, ಆಡಳಿತ, ಕಾರ್ಯಭಾರ ಮತ್ತು ಕಾರ್ಯವಿಧಾನಗಳು ವೈವಿಧ್ಯಮಯವಾಗಿ ಬೆಳೆದುಬಂದಿವೆ. ಎಲ್ಲ ಕಡೆಗಳಲ್ಲೂ ಅವುಗಳ ಹೊಣೆಗಾರಿಕೆಯಂತೂ ಬಹುವಾಗಿ ವಿಸ್ತಾರಗೊಂಡಿದೆ.

   
ಇಂಗ್ಲೆಂಡಿನ ಅರಸು ಮೂರನೆಯ ವಿಲಿಯಂ ಕ್ರಿ.ಶ.1694 ರಲ್ಲಿ ಬ್ಯಾಂಕ್ ಆಫ್ ಇಂಗ್ಲೇಂಡ್ ಆರಂಭಿಸಿದನು. ಪ್ಯಾಟರ್‍ಸನ್ ಎಂಬುವನು 12,00,000 ಪೌಂಡುಗಳನ್ನು ಸರ್ಕಾರಕ್ಕೆ ಸಾಲ ನೀಡಿ, ಕೆಲವು ಸೌಲಭ್ಯ ಹೊಂದು ಕರಾರಿನೊಡನೆ ಈ ಬ್ಯಾಂಕು ಸ್ಥಾಪನೆಗೆ ನೆರವಾದನು. ಟನ್ನೇಜ್ ಕಾಯಿದೆಯ ಮೂಲಕ ಈ ಬ್ಯಾಂಕು ಸ್ಥಾಪಿತವಾಯಿತು. ಕ್ರಿ.ಶ. 1708 ರಲ್ಲಿ ಮತ್ತೊಂದು ಕಾಯಿದೆಯನ್ನು ತಂದು ಬ್ರಿಟಿಷ್ ಸರ್ಕಾರವು ಕಾಗದ ಹಣವನ್ನು ಕೇವಲ ಬ್ಯಾಂಕ್ ಆಫ್ ಇಂಗ್ಲೇಂಡ್ ಮಾತ್ರ ಮುದ್ರಿಸುವ ಏಕ ಸ್ವಾಮ್ಯಾಧಿಕಾರವನ್ನು ನೀಡಿತು. 

   
ಭಾರತದಲ್ಲಿ ಕೇಂದ್ರಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಕರೆಯುತ್ತೇವೆ. 1929 ರ ಆರ್ಥಿಕ ಕುಸಿತ ಹಾಗೂ 1931 ರ ಅಸಹಕಾರ ಆಂದೋಲನದ ಕಾರಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಬೆಳವಣಿಗೆ ಕುಂಠಿತವಾದರೂ ರಿಸರ್ವ್ ಬ್ಯಾಂಕ್‍ನ ಸ್ಥಾಪನೆಯ ತನಕ ಹೀಗೆಯೇ ಮುಂದುವರೆಯಿತು. ಸೆಪ್ಟೆಂಬರ್ 1933 ರಲ್ಲಿ ಸರ್ ಜಾರ್ಜ್ ಶೂಸ್ಟರ್  ಹೊಸ ಮಸೂದೆಯನ್ನು ಮಂಡಿಸಿದರು. ಅದು ಅಂಗೀಕೃತವಾಗಿ 6.3.1934 ರಲ್ಲಿ ಸರ್ಕಾರದಲ್ಲಿ ಮಸೂದೆಯಾಗಿ ಬಂದಿತು. ದಿನಾಂಕ 1.4.1935 ರಂದು ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯಾರಂಭಮಾಡತೊಡಗಿತು. 1947 ರಲ್ಲಿ ಮೊತ್ತಮೊದಲಿಗೆ ವಿನಿಯಂತ್ರಣ(ನಿರ್ಬಂಧ ತೆಗೆಯುವ) ಕ್ರಮ ಕೈಗೊಂಡಿತು. ಜನವರಿ, 1952 ರಿಂದ ಹುಂಡಿ ಮಾರುಕಟ್ಟೆಯ ಯೋಜನೆಯನ್ನು ಪ್ರಾರಂಭಿಸಿದ್ದು ಭಾರತೀಯ ಹಣಕಾಸಿನ ಕ್ಷೇತ್ರದಲ್ಲೊಂದು ಐತಿಹಾಸಿಕ ದಾಖಲೆಯಾಯಿತು. 

ಕೇಂದ್ರೀಯ ಬ್ಯಾಂಕುಗಳ ಕಲಾಪಗಳು ಕ್ರಮೇಣ ರೂಪುಗೊಳ್ಳಲು ಕಾರಣವಾದ ಪ್ರವೃತ್ತಿಗಳು ಎರಡು ಬಗೆ. ಒಂದು ದೇಶದಲ್ಲಿದ್ದ ಬ್ಯಾಂಕುಗಳು ತಮ್ಮ ಹಿತಗಳನ್ನು ರಕ್ಷಿಸಿಕೊಳ್ಳಲು ನಡೆಸಿದ ಸಂಘಟನೆಯ ಪ್ರಯತ್ನದ ಫಲವಾಗಿ ಬ್ಯಾಂಕುಗಳ ಬ್ಯಾಂಕಾಗಿ ಕೇಂದ್ರೀಯ ಬ್ಯಾಂಕು ರೂಪುಗೊಳ್ಳಲು ಸಾಧ್ಯವಾಯಿತು. ಒಂದು ಗೊತ್ತಾದ ವಿತ್ತೀಯ ನೀತಿಯ ಅನ್ವಯಕ್ಕಾಗಿ ಹಣ ವ್ಯವಸ್ಥೆಯನ್ನು ಸಾಧನವನ್ನಾಗಿ ಮಾಡಿಕೊಳ್ಳಲು ಸರ್ಕಾರ ನಡೆಸಿದ ಪ್ರಯತ್ನದ ಫಲವಾಗಿ ಅದು ಸರ್ಕಾರದ ಬ್ಯಾಂಕಾಗಿ ರೂಪುಗೊಂಡಿತು. ಕೇವಲ ವಿತ್ತೀಯ ನೀತಿಯನ್ನೆ ಅಲ್ಲದೆ ಒಂದು ನಿರ್ದಿಷ್ಟ ಆರ್ಥಿಕ ನೀತಿಯ ಸಾಧನೆಗಾಗಿ ಶ್ರಮಿಸುವ ಹೊಣೆಗಾರಿಕೆಯೂ ಕೇಂದ್ರೀಯವೆನಿಸಿಕೊಂಡ ಬ್ಯಾಂಕಿಗೆ ಪ್ರಾಪ್ತವಾಯಿತು. ಈ ದ್ವಿಮುಖ ಪ್ರಯತ್ನದ ಫಲವಾಗಿ ವಿಕಾಸ ಹೊಂದಿದ ಕೇಂದ್ರೀಯ ಬ್ಯಾಂಕು ಒಂದು ಬ್ಯಾಂಕಾಗಿ ಸಂಘಟಿತವಾಗಿ, ಕೊನೆಗೆ ರಾಷ್ಟ್ರದ ಸಾರ್ವಭೌಮಾಧಿಕಾರಕ್ಕೆ ಒಳಪಟ್ಟಿತು-ಎಂದು ಆರ್.ಎಸ್.ಸೇಯರ್ಸ್ ಹೇಳುತ್ತಾನೆ.

	
20ನೆಯ ಶತಮಾನಕ್ಕೂ ಹಿಂದಿನಿಂದಲೂ ಕೇಂದ್ರೀಯ ಬ್ಯಾಂಕಿನ ಬೆಳವಣಿಗೆಯಾಗಿರುವುದಾದರೂ ಮುಂಚಿನ ಬೆಳವಣಿಗೆಯೆಲ್ಲ ಕೇವಲ ಪ್ರಾಯೋಗಿಕ. ಕೇಂದ್ರೀಯ ಬ್ಯಾಂಕಿನ ತತ್ತ್ವವೂ ವಿಧಾನವೂ ಆಗ ಸ್ಪಷ್ಟವಾಗಿಯೂ ಖಚಿತವಾಗಿಯೂ ರೂಪುಗೊಂಡಿರಲಿಲ್ಲ. ಇಂಗ್ಲೆಂಡ್, ಫ್ರಾನ್ಸ್, ಸ್ವೀಡನ್ ಮುಂತಾದ ದೇಶಗಳಲ್ಲಿ ಇಂದು ಕೇಂದ್ರೀಯವೆನಿಸಿಕೊಂಡಿರುವ ಬ್ಯಾಂಕುಗಳು ಕ್ರಮಕ್ರಮವಾಗಿ ಹೆಚ್ಚು ಹೆಚ್ಚು ಪ್ರಾಮುಖ್ಯ ಗಳಿಸುತ್ತಿದ್ದುವು. ನೋಟು ನೀಡಿಕೆಯ ಬಗ್ಗೆ ಅವಕ್ಕೆ ಬಹಳ ಮಟ್ಟಿಗೆ ಏಕಸ್ವಾಮ್ಯ ಇದ್ದುದರಿಂದಲೂ ಅವು ತಂತಮ್ಮ ಸರ್ಕಾರಗಳ ಪ್ರತಿನಿಧಿಗಳಾಗಿದ್ದುದರಿಂದಲೂ ಅವಕ್ಕೆ ಪ್ರಾಶಸ್ತ್ಯ ಲಭ್ಯವಾಗಿತ್ತು. ಹಿಂದೆ ಅವನ್ನು ನೋಟು ನೀಡಿಕೆ ಬ್ಯಾಂಕುಗಳೆಂದೋ ರಾಷ್ಟ್ರೀಯ ಬ್ಯಾಂಕುಗಳೆಂದೋ ಕರೆಯಲಾಗುತ್ತಿತ್ತು. ಕೇಂದ್ರೀಯ ಬ್ಯಾಂಕುಗಳ ಪೈಕಿ ಅತ್ಯಂತ ಹಳೆಯದು ಸ್ವೀಡನಿನ ರಿಕ್ಸ್ ಬ್ಯಾಂಕು (1656). ಆದರೆ ಕೇಂದ್ರೀಯ ಬ್ಯಾಂಕಿಂಗ್ ವ್ಯವಹಾರವನ್ನು ಮೊಟ್ಟಮೊದಲಿಗೆ ವ್ಯವಸ್ಥಿತವಾಗಿ ಮಾಡಲಾರಂಭಿಸಿದ್ದು ಇಂಗ್ಲೆಂಡಿನ ಬ್ಯಾಂಕು (1694). ಅದು ಸ್ವತ: ಈ ರೀತಿ ವಿಕಾಸಗೊಂಡದ್ದಲ್ಲದೆ ಅನೇಕ ದೇಶಗಳ ಕೇಂದ್ರೀಯ ಬ್ಯಾಂಕುಗಳಿಗೆ ಸ್ಫೂರ್ತಿಯ ನೆಲೆಯಾಯಿತು, ಮಾದರಿಯಾಯಿತು. ಹಣ ಮತ್ತು ಬ್ಯಾಂಕಿಂಗುಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆ ಉದ್ಭವಿಸಿದಾಗ ಅದಕ್ಕೆ ಪರಿಹಾರೋಪಾಯಗಳನ್ನು ರೂಪಿಸುವಲ್ಲಿ ಇಂಗ್ಲೆಂಡಿನ ಬ್ಯಾಂಕು (ನೋಡಿ- ಇಂಗ್ಲೆಂಡಿನ-ಬ್ಯಾಂಕು) ಅನುಸರಿಸಿದ ಮಾರ್ಗ ವಿಶಿಷ್ಟವಾದ್ದು. ಅಲ್ಲದೆ ಯೂರೋಪಿನ ಇತರ ಕೆಲವು ದೇಶಗಳಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೂ 19ನೆಯ ಶತಮಾನದಲ್ಲಿ ಈ ಕ್ಷೇತ್ರದಲ್ಲಿ ಕೆಲವು ವಿಶಿಷ್ಟ ಪ್ರಯೋಗಗಳು ನಡೆದುವು. ಆ ಶತಮಾನದ ಕೊನೆಯ ವೇಳೆಗೆ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಸ್ಥಾಪಿತವಾಗಿದ್ದುವು. ನೋಟು ಚಲಾವಣೆ, ಸರ್ಕಾರದ ಹಣಕಾಸಿನ ವ್ಯವಹಾರಗಳ ನಿರ್ವಹಣೆ-ಇವು ಆ ಬ್ಯಾಂಕುಗಳ ಮುಖ್ಯ ಕಾರ್ಯಭಾರಗಳಾಗಿದ್ದುವು. ಆದರೂ ಕೇಂದ್ರೀಯ ಬ್ಯಾಂಕಿಂಗ್ ಪರಿಕಲ್ಪನೆ ಬಹುತೇಕ 20ನೆಯ ಶತಮಾನದಲ್ಲೇ ಸಂಪೂರ್ಣವಾಗಿ ವಿಕಾಸ ಹೊಂದಿತೆಂದು ಹೇಳಬೇಕು. 1920ರ ಅನಂತರದ ಕೇವಲ ಮೂವತ್ತೈದು ವರ್ಷಗಳಲ್ಲಿ 47 ಕೇಂದ್ರೀಯ ಬ್ಯಾಂಕುಗಳು ಸ್ಥಾಪಿತವಾದುವು. ಇಂದು ಕೇಂದ್ರೀಯ ಬ್ಯಾಂಕು ಇಲ್ಲದಂಥ ದೇಶಗಳು ಇಲ್ಲವೇ ಇಲ್ಲವೆಂದು ಹೇಳಬೇಕು.

	ಒಂದನೆಯ ಮಹಾಯುದ್ಧ ಪ್ರಾರಂಭವಾಗುವವರೆಗೂ ಅಂತರರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೆ ಅನುಕೂಲವಾದ ವಾತಾವರಣವಿತ್ತು. ಬೆಳೆಯುತ್ತಿದ್ದ ಕೈಗಾರಿಕೆಗಳು, ಮಾರುಕಟ್ಟೆ, ಅಂತರರಾಷ್ಟ್ರೀಯ ವ್ಯಾಪಾರ, ಅನಿರ್ಬಂಧ ಆರ್ಥಿಕ ನೀತಿ, ಅಂತರರಾಷ್ಟ್ರೀಯ ಸುವರ್ಣಪ್ರಮಿತಿ-ಇವೇ ಮೊದಲಾದ ಅನುಕೂಲ ಪರಿಸ್ಥಿತಿಗಳಿಂದಾಗಿ ಒಂದು ದೇಶದ ಹಣದ ರೀತಿನೀತಿಗಳನ್ನು ನಡೆಸಿಕೊಂಡು ಬರುವುದು ಸುಲಭವಾಗಿತ್ತು. ಅನಿರ್ಬಂಧವಾಗಿ ಬಂಗಾರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಾಗುತ್ತಿದ್ದುದರಿಂದ ಅಂತರರಾಷ್ಟ್ರೀಯ ಸರಕುವಿನಿಮಯ, ನಾಣ್ಯವಿನಿಮಯ ಮತ್ತು ವ್ಯಾಪಾರ ಶಿಲ್ಕು ತೀರುವೆಗಳು ಯಾರೊಬ್ಬರ ಕೈವಾಡವಿಲ್ಲದೆ ಹೊಂದಿಕೊಂಡು ಹೋಗಲು ಅವಕಾಶವಿತ್ತು. ಯುದ್ಧಾನಂತರ ಈ ಅನುಕೂಲಕರ ವಾತಾವರಣ ಬದಲಾಯಿಸಿತು. ಎಲ್ಲ ದೇಶಗಳೂ ಆರ್ಥಿಕ ಮತ್ತು ಹಣನೀತಿಗಳನ್ನು ತಂತಮ್ಮ ಹಿತದೃಷ್ಟಿಗಳಿಂದ ಬದಲಾಯಿಸತೊಡಗಿದುವು. ಆದ್ದರಿಂದ 1920ರಲ್ಲಿ ಬ್ರಸೆಲ್ಸ್‍ನಲ್ಲಿ ಸೇರಿದ್ದ ಅಂತರರಾಷ್ಟ್ರೀಯ ಹಣ ಸಮ್ಮೇಳನ ಎಲ್ಲ ದೇಶಗಳೂ ಕೇಂದ್ರೀಯ ಬ್ಯಾಂಕುಗಳನ್ನು ಸ್ಥಾಪಿಸಿದರೆ ಅಂತರರಾಷ್ಟ್ರೀಯ ಹಣ ವ್ಯವಸ್ಥೆ ಪರಿಣಾಮಕಾರಿಯಾಗುವುದೆಂಬುದಾಗಿ ವರದಿ ಮಾಡಿತು. ಇದರ ಪರಿಣಾಮವಾಗಿ ಮುಂದಿನ ಎರಡು ದಶಕಗಳಲ್ಲಿ ಅನೇಕ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಸ್ಥಾಪಿತವಾದುವು. ಅಲ್ಲದೆ, ಕೇಂದ್ರೀಯ ಬ್ಯಾಂಕುಗಳ ಸಹಕಾರದಿಂದ ಅಂತರರಾಷ್ಟ್ರೀಯ ಸಹಕಾರಕ್ಕೆ ಅನುಕೂಲವಾದ ಅಂತರರಾಷ್ಟ್ರೀಯ ಹಣ ಸಂಸ್ಥೆಗಳನ್ನು ಮುಂದೆ ಪ್ರಾರಂಭಿಸಲು ಅನುಕೂಲವಾಯಿತು. 

	ಎರಡನೆಯ ಮಹಾಯುದ್ಧವಾದ ಮೇಲೆ ಕೇಂದ್ರೀಯ ಬ್ಯಾಂಕುಗಳ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ಪ್ರಾರಂಭವಾಯಿತು. ಹಿಂದುಳಿದ ಅನೇಕ ದೇಶಗಳು ರಾಜಕೀಯ ಸ್ವಾತಂತ್ರ್ಯ ಗಳಿಸಿ ಆರ್ಥಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡುದರಿಂದ ಕೇಂದ್ರೀಯ ಬ್ಯಾಂಕುಗಳ ಅವಶ್ಯಕತೆ ಹೆಚ್ಚಾಯಿತು. ಆರ್ಥಿಕ ಅಭಿವೃದ್ಧಿಗೆ ಮಾರ್ಗದರ್ಶಕವಾದ ಕೇಂದ್ರೀಯ ಬ್ಯಾಂಕುಗಳು ಹೊಸದಾಗಿ ರಾಜಕೀಯ ಸ್ವಾತಂತ್ರ್ಯ ಪಡೆದ ದೇಶಗಳಲ್ಲೆಲ್ಲ ಸ್ಥಾಪಿತವಾದುವು. ಇದೇ ಕಾಲದಲ್ಲಿ ಕೇಂದ್ರೀಯ ಬ್ಯಾಂಕುಗಳ ಕಾರ್ಯವ್ಯಾಪ್ತಿ ಮತ್ತು ಕೇಂದ್ರೀಯ ಬ್ಯಾಂಕುಗಳ ವಿಚಾರದಲ್ಲಿ ಸರ್ಕಾರದ ಧೋರಣೆ-ಇವುಗಳಲ್ಲೂ ಮುಖ್ಯ ಬದಲಾವಣೆಗಳಾದುವು. ಹೊಸದಾಗಿ ಸ್ಥಾಪಿತವಾದ ಬ್ಯಾಂಕುಗಳು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲದೆ ಆರ್ಥಿಕ ಅಭಿವೃದ್ಧಿಗೂ ಆದ್ಯತೆ ಕೊಡಲಾರಂಭಿಸಿದುವು.  ಕೇಂದ್ರೀಯ ಬ್ಯಾಂಕುಗಳು ಖಾಸಗಿ ಬ್ಯಾಂಕುಗಳಾಗಿ ಸರ್ಕಾರದ ಪ್ರಭಾವದಿಂದ ದೂರವಿರಬೇಕೆಂಬ ಅಭಿಪ್ರಾಯವೂ ಬದಲಾಯಿಸಿತು. ಕೇಂದ್ರೀಯ ಬ್ಯಾಂಕುಗಳು ರಾಷ್ಟ್ರದ ಆರ್ಥಿಕ ಮತ್ತು ಹಣದ ಕಾರ್ಯನಿರ್ವಹಣೆಯಲ್ಲಿ ಮುಖ್ಯಪಾತ್ರ ಹೊಂದಿದ್ದ ಸಂಸ್ಥೆಗಳಾದುದರಿಂದ ಅವುಗಳ ಮೇಲೆ ಸರ್ಕಾರದ ಹತೋಟಿ ಹೆಚ್ಚಲಾರಂಭಿಸಿತು. ಅವುಗಳ ಕಾರ್ಯಕ್ರಮಗಳು ಸರ್ಕಾರದ ಆರ್ಥಿಕ ಧೋರಣೆಗೆ ಹೊಂದಿಕೊಂಡು ಹೋಗಲು ಅನುಕೂಲವಾಗುವುದೆಂದು ಭಾವಿಸಿ ಅನೇಕ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಇದರ ಪರಿಣಾಮವಾಗಿ ಇವು ಇಂದು ಸರ್ಕಾರದ ಮುಖ್ಯ ಅಂಗಗಳಾಗಿ ವರ್ತಿಸುತ್ತಿವೆ. ಕೆಲವು ದೇಶಗಳಲ್ಲಿ ಕಾನೂನಿನ ಪ್ರಕಾರ ಇವು ಸ್ವತಂತ್ರವಾಗಿ ಕಾರ್ಯ ನಡೆಸುವ ಅಧಿಕಾರ ಪಡೆದಿದ್ದರೂ, ಕಾರ್ಯತ: ಸರ್ಕಾರದ ಧೋರಣೆಯನ್ನು ಅನುಸರಿಸಿಯೇ ನಡೆಯಬೇಕಾಗಿದೆ.

ಸ್ಥಾನ : ಕೇಂದ್ರೀಯ ಬ್ಯಾಂಕು ಒಂದು ವಿಶಿಷ್ಟ ಸಂಸ್ಥೆ. ಒಂದೊಂದು ದೇಶಕ್ಕೂ ತನ್ನದೇ ಆದ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆ ಇರುತ್ತದೆ. ಅದು ಇಂಗ್ಲೆಂಡಿನ ಬ್ಯಾಂಕಿನ ಹಾಗೆ ಒಂದೇ ಸಂಸ್ಥೆ ಆಗಿರಬಹುದು ; ಇಲ್ಲವೇ ಅಮೆರಿಕದ ಫೆಡರಲ್ ರಿಸರ್ವ್ ವ್ಯವಸ್ಥೆಯ ಹಾಗೆ ಹಲವು ಸಂಸ್ಥೆಗಳ ಹೆಣಿಕೆಯಾಗಿರಬಹುದು. ಕೇಂದ್ರೀಯ ಬ್ಯಾಂಕು ಅಪಾರವಾದ ಲಾಭ ಸಂಪಾದಿಸಬಹುದಾದರೂ ಲಾಭ ಗಳಿಸುವುದು ಅದರ ಉದ್ದೇಶವಲ್ಲ. ಆದರೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವುದಲ್ಲದೆ ಸರ್ಕಾರದ ಆರ್ಥಿಕ ನೀತಿಗೆ ಬೆಂಬಲ ನೀಡುವುದು ಅದರ ಉದ್ದೇಶವಾಗಿರುತ್ತದೆ. ವಾಣಿಜ್ಯ ಬ್ಯಾಂಕುಗಳ ನಿಯಂತ್ರಣಕ್ಕಾಗಿ ಅದಕ್ಕೆ ವಿಶೇಷವಾದ ಅಧಿಕಾರ ಕೊಡಲಾಗಿದೆ. ಅದು ಸಾಮಾನ್ಯವಾಗಿ ಸರ್ಕಾರದ ಯಂತ್ರದ ಅಂಗವಾಗಿದ್ದರೂ ವಿಶೇಷ ಸ್ಥಾನ ಗಳಿಸಿರುತ್ತದೆ. ಅದೊಂದು ಸ್ವತಂತ್ರ ಅಂಗ ಸಂಸ್ಥೆ. ಅದರ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರ ನೇರವಾಗಿ ಪ್ರವೇಶಿಸುವುದಿಲ್ಲ. ಆದರೆ ಅದರ ನೀತಿಗಳನ್ನು ರೂಪಿಸುವ ಅಧಿಕಾರ ಸರ್ಕಾರಕ್ಕುಂಟು. ಕೇಂದ್ರೀಯ ಬ್ಯಾಂಕುಗಳು ಖಾಸಗಿ ಸಂಸ್ಥೆಗಳಾಗಿದ್ದಾಗಲೂ ಸರ್ಕಾರಗಳು ಅವುಗಳ ಮೇಲೆ ವಿಶೇಷವಾದ ಅಧಿಕಾರ ಚಲಾಯಿಸುತ್ತಿದ್ದುವು.  ನೋಟು ಚಲಾವಣೆಯ ವಿಶಿಷ್ಟವಾದ ಅಧಿಕಾರ ಕೇಂದ್ರೀಯ ಬ್ಯಾಂಕಿಗೆ ಸರ್ಕಾರ ಕೊಟ್ಟಿರುವುದರಿಂದ ತುರ್ತು ಸಂದರ್ಭಗಳಲ್ಲಿ ತನ್ನ ಖರ್ಚುಗಳನ್ನು ನಿರ್ವಹಿಸಲು ಅದು ಕೇಂದ್ರೀಯ ಬ್ಯಾಂಕನ್ನು ಒಂದು ಸಾಧನವಾಗಿ ಮಾಡಿಕೊಂಡು ನೋಟುಗಳ ಅತಿಪ್ರಸರಣಕ್ಕೆ ಕಾರಣವಾಗಬಹುದು. ಆದ್ದರಿಂದ ಸರ್ಕಾರಕ್ಕೂ ಕೇಂದ್ರೀಯ ಬ್ಯಾಂಕಿಗೂ ಇರಬೇಕಾದ ಸಂಬಂಧ ಅತ್ಯಂತ ಸೂಕ್ಷ್ಮವಾದ್ದು.

	ಕಾರ್ಯಭಾರಗಳು : ಆಧುನಿಕ ಕೇಂದ್ರೀಯ ಬ್ಯಾಂಕಿನ ಕಾರ್ಯಭಾರಗಳು ಸ್ಥೂಲವಾಗಿ ಏಳು ಬಗೆ : 1 ನೋಟು ನೀಡಿಕೆ; 2 ಸರ್ಕಾರದ ಹಣ ವಹಿವಾಟುಗಳ ನಿರ್ವಹಣೆ, ಅದರ ಪ್ರತಿನಿಧಿಯಾಗಿ ಸಲಹೆಗಾರನಾಗಿ ಕಾರ್ಯಾಚರಣೆ ; 3 ವಾಣಿಜ್ಯ ಬ್ಯಾಂಕುಗಳ ನಗದು ಸಂಚಿತಿಗಳ ನಿಯಂತ್ರಣ ; 4 ದೇಶದ ವಿದೇಶೀ ವಿನಿಮಯ ಶಿಲ್ಕುಗಳ ನಿಯಂತ್ರಣ; 5 ಬ್ಯಾಂಕುಗಳಿಗೆ ಅಂತಿಮ ಸಾಲ ಸಹಾಯ ನೀಡಿಕೆ ; 6 ಬ್ಯಾಂಕುಗಳಲ್ಲಿ ಪರಸ್ಪರ ಋಣಗಳ ಇತ್ಯರ್ಥ ; 7 ಉದ್ದರಿ ನಿಯಂತ್ರಣ ಹಾಗೂ ದೇಶದ ಆರ್ಥಿಕ / ಹಣಕಾಸಿನ ವ್ಯವಸ್ಥೆಯ ನಿಯಂತ್ರಣ.

1 ನೋಟು ನೀಡಿಕೆ: ನಾಣ್ಯ ಚಲಾವಣೆ ಬಹು ಹಿಂದಿನಿಂದಲೂ ಸರ್ಕಾರದ ಪರಮಾಧಿಕಾರ. ನಾಣ್ಯ ಟಂಕಣದ ಕಾರ್ಯ ಇಂದಿಗೂ ಸರ್ಕಾರದ್ದೇ ಆಗಿರುವುದಾದರೂ ನೋಟು ಮುದ್ರಣ ಮತ್ತು ಚಲಾವಣೆಯ ಅಧಿಕಾರವನ್ನು ಅದು ಕೇಂದ್ರೀಯ ಬ್ಯಾಂಕಿಗೆ ನೀಡಿದೆ. ಆರಂಭಕಾಲದ ಕೇಂದ್ರೀಯ ಬ್ಯಾಂಕುಗಳು ನೋಟುನೀಡಿಕೆಯ ಬ್ಯಾಂಕುಗಳಾಗಿಯೇ ಉದಯವಾದುವು. ಹಿಂದೆ ವಾಣಿಜ್ಯ ಬ್ಯಾಂಕುಗಳಿಗೂ ನೋಟು ನೀಡಿಕೆಯ ಅಧಿಕಾರ ಇತ್ತು. ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರೀಯ ಬ್ಯಾಂಕಿಗೆ ಬಿಟ್ಟುಕೊಡುವುದು ಸೂಕ್ತವೆಂಬ ಭಾವನೆ ಕ್ರಮೇಣ ಬಲಿಯಿತು. ಏಕರೀತಿಯ ನೋಟು ನೀಡಿಕೆಯಿಂದ ವಾಣಿಜ್ಯ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ಸಹಾಯವಾಗುತ್ತದೆ. ದೇಶದ ಹಣದ ಸರಬರಾಜಿನ ಮೇಲೆ ಕೇಂದ್ರೀಯ ಬ್ಯಾಂಕು ಹೆಚ್ಚಿನ ನಿಯಂತ್ರಣ ಸಾಧಿಸುವುದೂ ವಾಣಿಜ್ಯ ಬ್ಯಾಂಕುಗಳ ಉದ್ದರಿ ವ್ಯವಹಾರವನ್ನು ಕ್ರಮಬದ್ಧಗೊಳಿಸುವುದೂ ಇದರಿಂದ ಸಾಧ್ಯ. ನೋಟುಗಳ ಅತಿಯಾದ ನೀಡಿಕೆಯಾಗದಂತೆ ಎಚ್ಚರಿಕೆ ವಹಿಸಬಹುದು. ನೋಟು ನೀಡಿಕೆ ಅತ್ಯಂತ ಲಾಭದಾಯಕ ವ್ಯವಹಾರವಾದ್ದರಿಂದ ಈ ಅಧಿಕಾರ ಒಂದೇ ಬ್ಯಾಂಕಿನ ಕೈಯಲ್ಲಿದ್ದರೆ ಇದರ ಲಾಭದಲ್ಲಿ ಪಾಲ್ಗೊಳ್ಳಲು ಸರ್ಕಾರಕ್ಕೆ ಸುಲಭವಾಗುತ್ತದೆ. ಕೇಂದ್ರೀಯ ಬ್ಯಾಂಕಿನ ನೋಟು ನೀಡಿಕೆಯ ಕಾರ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರತಿಯೊಂದು ದೇಶದಲ್ಲೂ ವಿಶಿಷ್ಟವಾದ ಕಾನೂನು ಜಾರಿಯಲ್ಲಿರುತ್ತದೆ. ಅಮೂಲ್ಯ ಲೋಹಗಳು, ವಿದೇಶೀ ವಿನಿಮಯ, ಇತರ ಪ್ರತಿಭೂತಿಗಳು ಮುಂತಾದವನ್ನು ನೋಟು ನೀಡಿಕೆಗೆ ಬೆಂಗಡೆಯಲ್ಲಿ ಸಂಚಿತಿಯಾಗಿ ಇಡಬೇಕೆಂಬ ನಿಯಮಗಳಿರುವುದುಂಟು.

 	2 ಸರ್ಕಾರದ ಬ್ಯಾಂಕು : ಸರ್ಕಾರದ ಬ್ಯಾಂಕಾಗಿ, ಪ್ರತಿನಿಧಿಯಾಗಿ, ಸಲಹೆಗಾರನಾಗಿ ಕೇಂದ್ರೀಯ ಬ್ಯಾಂಕು ನಿರ್ವಹಿಸಬೇಕಾದ ಹೊಣೆಗಾರಿಕೆಯೂ ಬಹಳ ಭಾರವಾದ್ದೇ. ಕೇಂದ್ರೀಯ ಬ್ಯಾಂಕಿಗೆ ಸರ್ಕಾರವೇ ಮುಖ್ಯ ಗ್ರಾಹಕ. ಅದು ಸರ್ಕಾರಕ್ಕೆ ವಾಣಿಜ್ಯ ಬ್ಯಾಂಕಿನ ಸೇವೆಗಳನ್ನೆಲ್ಲ ಸಲ್ಲಿಸುತ್ತದೆ. ಸರ್ಕಾರದ ಪರವಾಗಿ ಹಣ ಪಾವತಿ ಮಾಡುವುದೂ ಸ್ವೀಕರಿಸುವುದೂ ಅದರ ಕೆಲಸ. ಸರ್ಕಾರಕ್ಕೆ ಅಲ್ಪಾವಧಿಯ ಸಾಲ ಒದಗಿಸುವುದು, ಸರ್ಕಾರದ ಸಾಲಗಳನ್ನು ಸಾರ್ವಜನಿಕರಿಗೆ ನೀಡುವುದು, ಅವುಗಳ ಮೇಲೆ ಬಡ್ಡಿ ಪಾವತಿ, ಸಾಲವಿಮೋಚನೆ ಮುಂತಾದ ಸೇವೆಗಳನ್ನೆಲ್ಲ ಕೇಂದ್ರೀಯ ಬ್ಯಾಂಕು ಸಲ್ಲಿಸುವುದಲ್ಲದೆ, ಹಣ ಮತ್ತು ಆರ್ಥಿಕ ವಿಚಾರಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತದೆ; ಮಾರ್ಗದರ್ಶಿಯಾಗಿಯೂ ವರ್ತಿಸುತ್ತದೆ.

3 ಬ್ಯಾಂಕುಗಳ ಬ್ಯಾಂಕು: ಒಂದು ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳೂ ತಮ್ಮ ನಗದು ಶಿಲ್ಕುಗಳಲ್ಲಿ ಒಂದು ಭಾಗವನ್ನು ಅಲ್ಲಿಯ ಕೇಂದ್ರೀಯ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುತ್ತವೆ. ಕೆಲವು ದೇಶಗಳಲ್ಲಿ ಇದು ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ; ಉಳಿದ ದೇಶಗಳಲ್ಲಿ ಕಾನೂನು ರೀತ್ಯ ಕಡ್ಡಾಯ. ವಾಣಿಜ್ಯ ಬ್ಯಾಂಕುಗಳ ಠೇವಣಿ ಲೆಕ್ಕಗಳು ಕೇಂದ್ರೀಯ ಬ್ಯಾಂಕಿನಲ್ಲಿರುವುದರಿಂದ ಅದು ಬ್ಯಾಂಕುಗಳ ಬ್ಯಾಂಕು. ವ್ಯವಹಾರ ಕಡಿಮೆಯಿದ್ದಾಗ ವಾಣಿಜ್ಯ ಬ್ಯಾಂಕುಗಳು ತಮ್ಮ ಹೆಚ್ಚುವರಿ ನಗದನ್ನು ಕೇಂದ್ರೀಯ ಬ್ಯಾಂಕಿನಲ್ಲಿಟ್ಟು, ಅಧಿಕ ಚಟುವಟಿಕೆಯ ಶ್ರಾಯದಲ್ಲಿ ಅದನ್ನು ಸೆಳೆಯುತ್ತವೆ. ಬ್ಯಾಂಕುಗಳ ನಗದು ಸಂಚಿತಿಗಳ ಕೇಂದ್ರೀಕರಣದಿಂದ ಅನೇಕ ಪ್ರಯೋಜನಗಳುಂಟು. ವಾಣಿಜ್ಯ ಬ್ಯಾಂಕುಗಳು ಅನಾವಶ್ಯಕವಾಗಿ ಹೆಚ್ಚು ನಗದನ್ನು ತಮ್ಮ ಬಳಿ ಇಟ್ಟುಕೊಳ್ಳುವ ಅಗತ್ಯ ತಪ್ಪುತ್ತದೆ. ನಗದು ಸಂಚಿತಿಯ ಕೇಂದ್ರೀಕರಣದಿಂದ ಇಡೀ ದೇಶದ ಉದ್ದರಿ ವ್ಯವಸ್ಥೆಯಲ್ಲಿ ಹೆಚ್ಚಿನ (ದ್ರವ್ಯತೆ)ಪುಟಿತತೆ ಸಾಧ್ಯ. ಹಣದ ಒತ್ತಡದ ಸಮಯದಲ್ಲಿ ಅಥವಾ ಜರೂರು ಸಂದರ್ಭಗಳಲ್ಲಿ ತತ್‍ಕ್ಷಣವೇ, ಅತ್ಯಂತ ಪ್ರಭಾವಯುತವಾಗಿ, ಇದು ಒದಗಿ ಬರುತ್ತದೆ. ಇದರಿಂದ ವಾಣಿಜ್ಯ ಬ್ಯಾಂಕುಗಳಿಗೆ ಹೆಚ್ಚಿನ ಸ್ಥಿರತೆ ಲಭ್ಯವಾಗುತ್ತದೆ. ಕಷ್ಟದಲ್ಲಿರುವ ವಾಣಿಜ್ಯ ಬ್ಯಾಂಕುಗಳಿಗೆ ಕೇಂದ್ರೀಯ ಬ್ಯಾಂಕು ನೆರವು ಒದಗಿಸುವುದು ಹೆಚ್ಚು ಸುಲಭ. ಎಲ್ಲ ವಾಣಿಜ್ಯ ಬ್ಯಾಂಕುಗಳೂ ಕೇಂದ್ರೀಯ ಬ್ಯಾಂಕಿನ ಠೇವಣಿದಾರ ಸಂಸ್ಥೆಗಳಾದ್ದರಿಂದ ಅವನ್ನು ಕೇಂದ್ರೀಯ ಬ್ಯಾಂಕು ನಿಯಂತ್ರಣಕ್ಕೆ ಒಳಪಡಿಸಬಹುದು.

4 ವಿದೇಶಿ ವಿನಿಮಯ ನಿರ್ದೇಶನ ಹಾಗೂ ನಿಯಂತ್ರಣ : ವಿವಿಧ ದೇಶಗಳ ನಾಣ್ಯ ವ್ಯವಸ್ಥೆಗಳು ಸುವರ್ಣಪ್ರಮಿತಿಯ ತಳಹದಿಯ ಮೇಲೆ ರಚಿತವಾಗಿದ್ದಾಗ ಅದು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಕೇಂದ್ರೀಯ ಬ್ಯಾಂಕುಗಳ ಹೊಣೆಯಾಗಿತ್ತು. ಒಂದು ದೇಶದ ವ್ಯಾಪಾರಶಿಲ್ಕು ಅದಕ್ಕೆ ಪ್ರತಿಕೂಲವಾಗಿದ್ದು ಅಲ್ಲಿಂದ ಚಿನ್ನ ಹರಿದುಹೋಗುವ ಪ್ರವೃತ್ತಿ ತೋರಿದಾಗ, ಅಥವಾ ಅದಕ್ಕೆ ವಿಲೋಮ ಸನ್ನಿವೇಶದಲ್ಲಿ ದೇಶದೊಳಕ್ಕೆ ಚಿನ್ನ ಅತಿಯಾಗಿ ಹರಿದು ಬರುವ ಪ್ರವೃತ್ತಿ ಇದ್ದಾಗ ಉದ್ಭವಿಸುತ್ತಿದ್ದ ಅಸ್ಥಿರ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಬ್ಯಾಂಕು ದರವೇ ಮುಂತಾದ ಉಪಾಯಗಳಿಂದ ಆ ಪ್ರವೃತ್ತಿಯನ್ನು ನಿವಾರಿಸುವುದು ಕೇಂದ್ರೀಯ ಬ್ಯಾಂಕಿನ ಕರ್ತವ್ಯವಾಗಿತ್ತು. ಸುವರ್ಣ ಪ್ರಮಿತಿ ಸುಸೂತ್ರವಾಗಿ ಕೆಲಸ ಮಾಡುವಂತೆ ಏರ್ಪಡಿಸಲು ಅದು ಚಿನ್ನದ ಸಂಚಿತಿಯ ಸುಫರ್ದು ಹೊಂದಿರಬೇಕಾದ್ದು ಅವಶ್ಯವಾಗಿತ್ತು. ಒಂದನೆಯ ಮಹಾಯುದ್ಧಾನಂತರದ ಕಾಲದಲ್ಲಿ ಬಹುತೇಕ ರಾಷ್ಟ್ರಗಳು ಸುವರ್ಣ ಪ್ರಮಿತಿಯಿಂದ ದೂರ ಸರಿದುವು. ಕೇಂದ್ರೀಯ ಬ್ಯಾಂಕುಗಳು ನೀಡುವ ನೋಟುಗಳು ಚಿನ್ನಕ್ಕೆ ಪರಿವರ್ತನೆಯಾಗುವುದಿಲ್ಲವಾದರೂ ಅವಕ್ಕೆ ಬೆಂಗಾವಲಾಗಿಯೂ ಅಂತರರಾಷ್ಟ್ರೀಯ ವ್ಯವಹಾರಗಳಿಗಾಗಿಯೂ ವಿದೇಶಿ ವಿನಿಮಯಗಳ ಸಂಚಿತಿ ಇರುವುದು ಅವಶ್ಯ. ಒಂದು ದೇಶದ ನಾಣ್ಯದ ವಿನಿಮಯ ದರದಲ್ಲಿ ಅಸ್ಥಿರತೆ ಏರ್ಪಡದಂತೆ ಸಂರಕ್ಷಿಸುವುದಕ್ಕೆ ಇದು ಸಾಧಕ. ಆದ್ದರಿಂದ ವಿದೇಶಿ ವಿನಿಮಯದ ಸುಪರ್ದು ಕೇಂದ್ರೀಯ ಬ್ಯಾಂಕುಗಳ ಒಂದು ಕಾರ್ಯಗಾರ. 

5 ಅಂತಿಮ ಸಾಲ ನೆರವು :  ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೆಂದ್ರೀಯ ಬ್ಯಾಂಕಿನ ಗ್ರಾಹಕ ಸಂಸ್ಥೆಗಳಾಗಿರುವುದರಿಂದ, ಅವು ಕೇಂದ್ರೀಯ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವುದರಿಂದ ಉತ್ಕಟ ಸಮಯಗಳಲ್ಲಿ ಅವುಗಳ ನೆರವಿಗೆ ಬರುವುದು ಕೇಂದ್ರೀಯ ಬ್ಯಾಂಕಿನ ಹೊಣೆಯಾಗಿರುತ್ತದೆ. ಯಾವುದೇ ವಾಣಿಜ್ಯ ಬ್ಯಾಂಕಿನ ದ್ರವತೆಗೆ ಅಪಾಯ ತಟ್ಟಿದಾಗ, ನಗದಿಗಾಗಿ ಠೇವಣಿದಾರರು ಸಲ್ಲಿಸಿದ ಬೇಡಿಕೆಯನ್ನು ಅದು ತನ್ನೆಲ್ಲ ತತ್‍ಕ್ಷಣದ ಸಾಧನೆಗಳಿಂದಲೂ ಪೂರೈಸುವುದು ಅಸಾಧ್ಯವಾದಾಗ, ಅದು ನಗದಿಗಾಗಿ ಕೇಂದ್ರೀಯ ಬ್ಯಾಂಕಿನ ನೆರವು ಬೇಡುತ್ತದೆ. ತನ್ನಲ್ಲಿರುವ ಪ್ರತಿಭೂತಿಗಳನ್ನು ಕೇಂದ್ರೀಯ ಬ್ಯಾಂಕಿಗೆ ಕೊಂಡೊಯ್ದು ಅವುಗಳ ಮೇಲೆ ಮುಂಗಡ ನೀಡಬೇಕೆಂದು ಕೋರುತ್ತದೆ. ಎಂದರೆ ಅವನ್ನು ಮರು ವಟಾಯಿಸಲು ಬಯಸುತ್ತದೆ. ಇಂಥ ಸಮಯದಲ್ಲಿ ಕೇಂದ್ರೀಯ ಬ್ಯಾಂಕು ಅದಕ್ಕೆ ನೆರವು ನೀಡುವುದು ಅವಶ್ಯವಾದೀತು. ಇದು ಒಂದು ಬಗೆಯ ಆಪದ್ಧರ್ಮ. ಆದರೆ ಅದೇ ಸಮಯದಲ್ಲಿ ಕೇಂದ್ರೀಯ ಬ್ಯಾಂಕು ತನ್ನದೇ ಆದ ನಿಯಮಗಳನ್ನು ಹೇರಿ ವಾಣಿಜ್ಯ ಬ್ಯಾಂಕಿನ ಚಟುವಟಿಕೆಗಳನ್ನು ನಿಯಂತ್ರಿಸಬಹುದು-ಅವುಗಳ ಗಾತ್ರ ಗುಣಗಳ ಮೇಲೆ ಹತೋಟಿ ಏರ್ಪಡಿಸಬಹುದು. ಇದನ್ನು ಸಾಧಿಸಲು ವಾಣಿಜ್ಯ ಬ್ಯಾಂಕುಗಳ ಉದ್ಧರಿಯ ಪಡಿತರ, ಅವು ಕೇಂದ್ರೀಯ ಬ್ಯಾಂಕಿನಲ್ಲಿ ಮರು ವಟಾಯಿಸಬಹುದಾದ ಪ್ರತಿಭೂತಿಗಳ ನಿಗದಿ, ಬಡ್ಡಿದರ ಮುಂತಾದ ನಾನಾ ವಿಧಾನಗಳಿವೆ. ಆದರೆ ಹೀಗೆ ಮಾಡಿದಾಗ ಕೇಂದ್ರೀಯ ಬ್ಯಾಂಕಿನ ಪರಂಪರಾಗತವಾದ ಕಾರ್ಯಭಾರವಾದ ಅಂತಿಮ ನೆರವು ನೀಡಿಕೆಯ ಉದ್ದೇಶಕ್ಕೆ ಚ್ಯುತಿ ಬರುವುದಿಲ್ಲವೇ? - ಎಂಬುದು ಹಿಂದಿನಿಂದ ನಡೆದು ಬಂದಿರುವ ಒಂದು ವಾದ. ಕಾಲಾನುಕ್ರಮದಲ್ಲಿ ಕೇಂದ್ರೀಯ ಬ್ಯಾಂಕು ಇವೆರಡರ ಸಾಮರಸ್ಯವನ್ನು ಒಂದು ಕಲೆಯಾಗಿ ಶಾಸ್ತ್ರವಾಗಿ ಬಹಳ ಮಟ್ಟಿಗೆ ಸಾಧಿಸಿದೆ. ಈಚೆಗೆ ಮರು ವಟಾವಣೆಯ ಮೂಲಕ ಕೇಂದ್ರೀಯ ಬ್ಯಾಂಕಿನಿಂದ ಹಣ ಪಡೆಯುವ ಪದ್ಧತಿಯ ಪ್ರಾಮುಖ್ಯವೇ ಬಹಳವಾಗಿ ತಗ್ಗಿದೆ. ಇತರ ವಿಧಾನಗಳು ಪ್ರಮುಖವಾಗಿವೆ. 

6 ಋಣಗಳ ಇತ್ಯರ್ಥ: ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನಲ್ಲಿ ಲೆಕ್ಕ ತೆರೆದು ನಗದು ಠೇವಣಿ ಇಟ್ಟಿರುವುದರಿಂದ, ಅವೆಲ್ಲವೂ ಕೇಂದ್ರೀಯ ಬ್ಯಾಂಕಿನ ಗ್ರಾಹಕ ಬ್ಯಾಂಕುಗಳಾಗಿರುವುದರಿಂದ ಕೇಂದ್ರೀಯ ಬ್ಯಾಂಕಿಗೆ ಇನ್ನೊಂದು ಕಾರ್ಯಭಾರ ಪ್ರಾಪ್ತವಾಗಿದೆ. ಈ ಬ್ಯಾಂಕುಗಳ ಗ್ರಾಹಕರು ಇವುಗಳ ಮೇಲೆ ದಿನದಿನವೂ ಬರೆಯುವ ಚೆಕ್ಕುಗಳಿಂದಾಗಿ ಇವು ಪರಸ್ಪರವಾಗಿ ಹಣ ಕೊಡಬೇಕಾದ, ಪಡೆಯಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಈ ವ್ಯವಹಾರಗಳ ತೀರುವಳಿಯ ವ್ಯವಸ್ಥೆಯ ನಿರ್ವಹಣೆಯು ಕೇಂದ್ರೀಯ ಬ್ಯಾಂಕಿನ ಹೊಣೆ. ಅದೇ ನೇರವಾಗಿ ಈ ಕೆಲಸ ನಿರ್ವಹಿಸಬಹುದು, ತನ್ನ ಪ್ರತಿನಿಧಿಯನ್ನು ನೇಮಿಸಬಹುದು ಅಥವಾ ಅದಕ್ಕಾಗಿ ತೀರುವಳಿ ಸಂಸ್ಥೆಯೊಂದನ್ನು ರಚಿಸಬಹುದು. ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನ ಚೆಕ್ಕುಗಳ ಮೇಲೆ ವಸೂಲು ಮಾಡಬೇಕಾದ ಚೆಕ್ಕುಗಳ ಮೊಬಲಗು ಮತ್ತು ಎರಡನೆಯ ಬ್ಯಾಂಕು ಮೊದಲನೆಯ ಬ್ಯಾಂಕಿನ ಚೆಕ್ಕುಗಳ ಮೇಲೆ ಪಡೆಯಬೇಕಾದ ಮೊಬಲಗು ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಕಳೆದರೆ, ಅಂತಿಮವಾಗಿ ಯಾವ ಬ್ಯಾಂಕು ಹಣ ಕೊಡಬೇಕಾಗುತ್ತದೋ ಅದು ಕೇಂದ್ರೀಯ ಬ್ಯಾಂಕಿನ ಮೇಲೆ ಆ ಮೊಬಲಗಿಗೆ ಇನ್ನೊಂದು ಬ್ಯಾಂಕಿಗೆ ಚೆಕ್ಕು ನೀಡುತ್ತದೆ. ಹೀಗೆ ಬ್ಯಾಂಕುಗಳು ಪರಸ್ಪರವಾಗಿ ಪ್ರತಿದಿನದ ಲೆಕ್ಕ ಚುಕ್ತಾ ಮಾಡುವುದಕ್ಕೂ ಅದಕ್ಕನುಗುಣವಾಗಿ ಒಂದು ಬ್ಯಾಂಕಿನ ಲೆಕ್ಕದಿಂದ ಇನ್ನೊಂದು ಬ್ಯಾಂಕಿನ ಲೆಕ್ಕಕ್ಕೆ ಹಣವನ್ನು ವರ್ಗ ಮಾಡುವುದಕ್ಕೂ ಕೇಂದ್ರೀಯ ಬ್ಯಾಂಕು ಸಹಾಯಕ. 

7 ಉದ್ದರಿ ನಿಯಂತ್ರಣ : ಕೇಂದ್ರೀಯ ಬ್ಯಾಂಕಿನ ಕಾರ್ಯಭಾರಗಳ ಪೈಕಿ ಉದ್ಧರಿ ನಿಯಂತ್ರಣ ಬಹುಶ: ಅತ್ಯಂತ ಮುಖ್ಯವಾದದ್ದು ಎಂಬುದು ತಜ್ಞರ ಬಹುಮತ. ಆದರೆ ಅದು ಸರ್ಕಾರದ ಬ್ಯಾಂಕಾಗಿರುವುದರಿಂದ ನೋಟು ನೀಡಿಕೆಯ ಏಕಸ್ವಾಮ್ಯ ಹೊಂದಿರುವುದರಿಂದ, ಬ್ಯಾಂಕುಗಳ ಬ್ಯಾಂಕಾಗಿರುವುದರಿಂದ ಬ್ಯಾಂಕುಗಳ ಪರಸ್ಪರ ಲೆಕ್ಕ ತೀರುವೆಯ ಕಾರ್ಯ ಮಾಡುವುದರಿಂದ, ಅದಕ್ಕೆ ಬ್ಯಾಂಕುಗಳ ಉದ್ದರಿ ನಿಯಂತ್ರಣದ ಶಕ್ತಿ ಲಭ್ಯವಾಗಿದೆ ಎಂಬುದು ನಿಜ.  ಅಂತೂ ಉದ್ದರಿ ನಿಯಂತ್ರಣದ ಕಾರ್ಯಭಾರಕ್ಕೆ ಈಚಿನ ವರ್ಷಗಳಲ್ಲಿ ಬಹಳ ಹೆಚ್ಚಿನ ಪ್ರಾಮುಖ್ಯ ಲಭ್ಯವಾಗಿದೆ. ಉದ್ದರಿ ನಿಯಂತ್ರಣ ಸ್ಥೂಲವಾಗಿ ಎರಡು ವಿಧ: ಉದ್ದರಿಯ ಪರಿಮಾಣವನ್ನೆ ಹೆಚ್ಚು ಕಡಿಮೆ ಮಾಡುವುದು ಒಂದು ಬಗೆಯಾದರೆ, ಅದರ ಗುಣದಲ್ಲಿ ವ್ಯತ್ಯಾಸ ಮಾಡುವುದು ಇನ್ನೊಂದು ಬಗೆ. ಹಣದ ಮಾರುಕಟ್ಟೆಯ ಎಲ್ಲಾ ಕ್ಷೇತ್ರಗಳಿಗೂ ಅವಲಂಬಿಸುವಂತೆ ವ್ಯಾಪಕವಾಗಿ ಆಗಲಿ, ನಿಶ್ಚಿತ ವ್ಯವಹಾರಗಳಿಗೆ ಮಾತ್ರ ಅನ್ವಯವಾಗುವ ಹಾಗೆ ಆಗಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯೋಗ ಬಹಳ ಮಟ್ಟಿಗೆ ನಡೆದಿದೆ. ಈ ಉದ್ದೇಶ ಸಾಧನೆಗಾಗಿ ಕೇಂದ್ರೀಯ ಬ್ಯಾಂಕು ಪ್ರಯೋಗಿಸುವ ಅಸ್ತ್ರಗಳು ಹಲವಾರು. 

ಕೇಂದ್ರೀಯ ಬ್ಯಾಂಕಿನ ಅತ್ಯಂತ ಹಳೆಯ ಅಸ್ತ್ರವೆಂದರೆ ಬ್ಯಾಂಕ್ ದರದ ಏರಿಳಿತಗಳ ಪ್ರಯೋಗ. ಹಣದ ಮಾರುಕಟ್ಟೆ ಸದಸ್ಯರು ತನಗೆ ಒಪ್ಪಿಸುವ ಹುಂಡಿ ಮತ್ತು ಇತರ ಅಪೇಕ್ಷಣೀಯ ಪತ್ರಗಳ ವಟಾವಣೆ ಅಥವಾ ಮರು ವಟಾವಣೆಯ ಮೇಲೆ ಕೇಂದ್ರೀಯ ಬ್ಯಾಂಕು ವಿಧಿಸುವ ದರವೇ ಬ್ಯಾಂಕ್ ದರ. ಇದು ಕೇಂದ್ರೀಯ ಬ್ಯಾಂಕಿನ ಬಡ್ಡಿ ದರ. ಇದರ ಮೂಲಕ ಕೇಂದ್ರೀಯ ಬ್ಯಾಂಕು ಮಾರುಕಟ್ಟೆಯಲ್ಲಿಯ ಬಡ್ಡಿದರಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಉದ್ದರಿಯನ್ನು ಅಗ್ಗವಾಗಿ ಆಗಲಿ ಅಧಿಕವಾಗಿ ಆಗಲಿ ಮಾಡಬಹುದು. ಇದಕ್ಕನುಗುಣವಾಗಿ ಉದ್ದರಿ ವ್ಯವಹಾರದ ಗಾತ್ರದ ವ್ಯತ್ಯಾಸವಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಅಥವಾ ಇತರ ಹಣ ಸಂಸ್ಥೆಗಳು ಕೇಂದ್ರೀಯ ಬ್ಯಾಂಕಿನಿಂದ ಸಾಲ ಬಯಸಿದಾಗ ಅದು ಈ ದರವನ್ನು ಚಲಾಯಿಸುತ್ತದೆ. ಇದರ ಮೂಲಕ ಉದ್ದರಿಯನ್ನು ಕುಗ್ಗಿಸುವ ಅಥವಾ ಹಿಗ್ಗಿಸುವ ಶಕ್ತಿ ಕೇಂದ್ರೀಯ ಬ್ಯಾಂಕಿಗೆ ಇರುತ್ತದೆ ಎಂಬುದು ತತ್ವಶ: ನಿಜ. ಸುವರ್ಣ ಪ್ರಮಿತಿ ಸಾರ್ವತ್ರಿಕವಾಗಿ ಜಾರಿಯಲ್ಲಿದ್ದಾಗ ಬ್ಯಾಂಕು ದರ ಹೆಚ್ಚು ಪರಿಣಾಮಕಾರಿಯಾಗಿತ್ತು. ಈಗ ಕೇಂದ್ರೀಯ ಬ್ಯಾಂಕುಗಳು ಅಧಿಕ ಅಧಿಕವಾಗಿ ಇದರೊಂದಿಗೆ ಇತರ ನಿಯಂತ್ರಣಾಸ್ತ್ರಗಳನ್ನು ಪ್ರಯೋಗಿಸುತ್ತವೆ. 

ಬ್ಯಾಂಕು ದರ ಪರಿಣಾಮಕಾರಿಯಾಗಬೇಕಾದರೆ ವಾಣಿಜ್ಯ ಬ್ಯಾಂಕುಗಳೂ ಇತರ ಹಣಸಂಸ್ಥೆಗಳೂ ಕೇಂದ್ರೀಯ ಬ್ಯಾಂಕನ್ನೇ ಅವಲಂಬಿಸಿರಬೇಕು. ಕೇಂದ್ರೀಯ ಬ್ಯಾಂಕಿನಲ್ಲಿ ಒತ್ತೆ ಇಡಬಹುದಾದ ಪ್ರತಿಭೂತಿಗಳು ಅವುಗಳ ಬಳಿ ಇದ್ದಿರಬೇಕು. ಕೇಂದ್ರೀಯ ಬ್ಯಾಂಕಿನ ಪ್ರಭಾವ ಹೆಚ್ಚಿನದಿರಬೇಕು. ಹಣದ ಮತ್ತು ಬಂಡವಾಳದ ಮಾರುಕಟ್ಟೆಗಳು ಸುಸಂಘಟಿತವಾಗಿದ್ದು, ಬಡ್ಡಿಯ ದರದ ಏರಿಳಿತಗಳಿಗೆ ಅವು ಒಡನೆಯೇ ಮಿಡಿಯುವಷ್ಟು ಸೂಕ್ಷ್ಮವಾಗಿರಬೇಕು. ಸಾಲ, ಹೂಡಿಕೆಗಳಿಗೆ ಅನುಗುಣವಾಗಿ ಬೆಲೆ, ಕೂಲಿ, ಉದ್ಯೋಗ, ಉತ್ಪಾದನೆಗಳೆಲ್ಲ ವ್ಯತ್ಯಾಸಗೊಳ್ಳುವ ಪರಿಸ್ಥಿತಿ ಇರುವುದೂ ಅವಶ್ಯ. ಆದರೆ ಇವೆಲ್ಲವೂ ಇರುವುದು ಅಪರೂಪ. ಅಭಿವೃದ್ಧಿ ಶೀಲ ದೇಶದ ವಿಚಾರವಿರಲಿ, ಅಭಿವೃದ್ಧಿ ಹೊಂದಿದ ದೇಶದ ವಿಚಾರಕ್ಕೂ ಈ ಮಾತು ನಿಜ.

ವಾಣಿಜ್ಯ ಬ್ಯಾಂಕುಗಳ ಉದ್ದರಿ ವಿಸ್ತರಣೆಗೆ ಅವುಗಳ ನಗದು ಶಿಲ್ಕುಗಳೇ ಆಧಾರ. ಅವುಗಳ ನಗದು ಶಿಲ್ಕುಗಳಿಗೆ ಅವುಗಳ ಉದ್ದರಿ ಒಂದು ನಿಗದಿಯಾದ ಅನುಪಾತದಲ್ಲಿರುತ್ತದೆ. ಇದನ್ನು ಮೀರಿ ಉದ್ದರಿ ಹಿಗ್ಗಿಸುವುದು ಸಾಧ್ಯವಾಗುವುದಿಲ್ಲ. ವಿಲೋಮವಾಗಿ, ಉದ್ದರಿಯ ಗಾತ್ರ ಕುಗ್ಗಿ, ನಗದು ಶಿಲ್ಕಿಗೆ ಸಂಬಂಧಿಸಿದಂತೆ ಅದರ ಅನುಪಾತವೂ ಗೊತ್ತಾದ ಮಟ್ಟಕ್ಕಿಂತ ಕಡಿಮೆಯಾದರೆ ಆಗ ಬ್ಯಾಂಕಿನ ನಗದು ನಿಷ್ಪತ್ತಿ (ರೇಷಿಯೋ) ಅಗತ್ಯಕ್ಕಿಂತ ಅಧಿಕವಾಗಿ, ಬ್ಯಾಂಕಿನ ಲಾಭ ಕಡಿಮೆಯಾಗುತ್ತದೆ. ಆದ್ದರಿಂದ ಒಂದು ಬ್ಯಾಂಕಿನ ಉದ್ದರಿಯ ಗಾತ್ರವನ್ನು ನಿಷ್ಕರ್ಷಿಸುವ ಮುಖ್ಯ ಅಂಶವೆಂದರೆ ಅದರ ನಗದು ಸಂಚಿತಿ. ಇದನ್ನು ನಿರ್ದಿಷ್ಟ ದಿಕ್ಕಿನಲ್ಲಿ ವ್ಯತ್ಯಾಸಗೊಳಿಸಿ ಆ ಮೂಲಕ ಬ್ಯಾಂಕು ಉದ್ದರಿಯೂ ತಗ್ಗುವಂತೆ ಅಥವಾ ಏರುವಂತೆ ಮಾಡಬಹುದು. ಇದನ್ನು ಸಾಧಿಸಲು ಕೇಂದ್ರೀಯ ಬ್ಯಾಂಕು ಬಹಿರಂಗ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬಹುದು. ಕೇಂದ್ರೀಯ ಬ್ಯಾಂಕು ಮಾರುಕಟ್ಟೆಯನ್ನು ಪ್ರವೇಶಿಸಿ ಸಾರ್ವಜನಿಕರಿಂದ ಪ್ರತಿಭೂತಿಗಳನ್ನು ಕೊಳ್ಳಬಹುದು ಅಥವಾ ಅವರಿಗೆ ಪ್ರತಿಭೂತಿಗಳನ್ನು ಮಾರಬಹುದು. ಅದು ಪ್ರತಿಭೂತಿಗಳನ್ನು ಕೊಂಡಾಗ ಪ್ರತಿಯಾಗಿ ಚೆಕ್ಕುಗಳನ್ನು ಕೊಡುತ್ತದೆ. ಕೇಂದ್ರೀಯ ಬ್ಯಾಂಕಿಗೆ ಪ್ರತಿಭೂತಿಗಳನ್ನು ಮಾರಿದವರು ಅದರಿಂದ ಪಡೆದ ಚೆಕ್ಕುಗಳನ್ನು ತಂತಮ್ಮ ಬ್ಯಾಂಕು ಲೆಕ್ಕಗಳಿಗೆ ಜಮಾ ಮಾಡುತ್ತಾರೆ. ಇವೆಲ್ಲ ಕೇಂದ್ರೀಯ ಬ್ಯಾಂಕು ನೀಡಿದ ಚೆಕ್ಕುಗಳಾದ್ದರಿಂದ ಇವನ್ನು ತಮ್ಮ ಗ್ರಾಹಕರಿಂದ ಪಡೆದ ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕಿನಲ್ಲಿ ತಮ್ಮ ಲೆಕ್ಕಗಳಿಗೆ ಇವನ್ನು ಜಮಾ ಮಾಡುತ್ತವೆ. ಕೇಂದ್ರೀಯ ಬ್ಯಾಂಕಿನಲ್ಲಿ ಅವುಗಳ ಶಿಲ್ಕುಗಳು ಹೆಚ್ಚುತ್ತವೆ. ಈ ಶಿಲ್ಕುಗಳು ನಗದು ಸಂಚಿತಿಗಳೆಂದೇ ಪರಿಗಣಿತವಾಗಿರುವುದರಿಂದ ಆ ಬ್ಯಾಂಕುಗಳ ನಗದು ನಿಷ್ಪತ್ತಿ ಅಧಿಕವಾಗುತ್ತದೆ. ಆದ್ದರಿಂದ ಪ್ರತಿಯಾಗಿ ಅವು ಉದ್ದರಿ ವಿಸ್ತರಿಸಬಹುದು. ಕೇಂದ್ರೀಯ ಬ್ಯಾಂಕು ಬಹಿರಂಗಪೇಟೆಯಲ್ಲಿ ಪ್ರತಿಭೂತಿಗಳನ್ನು ಮಾರುವುದರಿಂದ ವಿಲೋಮಪ್ರಕ್ರಿಯೆ ಸಂಭವಿಸುತ್ತದೆ. ಕೇಂದ್ರೀಯ ಬ್ಯಾಂಕಿನಲ್ಲಿ ವಾಣಿಜ್ಯ ಬ್ಯಾಂಕುಗಳ ಶಿಲ್ಕುಗಳು ತಗ್ಗುವುದರಿಂದ ಅವು ತಮ್ಮ ನಗದು ನಿಷ್ಪತ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಉದ್ದರಿಯನ್ನು ಕುಗ್ಗಿಸುವುದು ಅವಶ್ಯ.

ಬಹಿರಂಗ ಮಾರುಕಟ್ಟೆ ವಹಿವಾಟು ಯಶಸ್ವಿಯಾಗಬೇಕಾದರೂ ಅನೇಕ ಅನುಕೂಲ ಪರಿಸ್ಥಿತಿಗಳು ಇರಬೇಕಾದ್ದು ಅವಶ್ಯ. ಧಾರಾಳವಾಗಿ ಮಾರುವಷ್ಟು ಅಥವಾ ಕೊಳ್ಳುವಷ್ಟು ಪ್ರತಿಭೂತಿಗಳು ಇರುವುದು ಅವಶ್ಯ. ಎಂದರೆ ದೇಶ ಆರ್ಥಿಕವಾಗಿ ಸಾಕಷ್ಟು ಮುಂದುವರೆದಿರಬೇಕು. ಕೇಂದ್ರೀಯ ಬ್ಯಾಂಕಿನ ಪ್ರಭಾವವೂ ಅಧಿಕಾರವೂ ಅಧಿಕವಾಗಿರಬೇಕು.

ಬಹಿರಂಗ ಮಾರುಕಟ್ಟೆ ವಹಿವಾಟುಗಳನ್ನೂ ಬ್ಯಾಂಕು ದರವನ್ನೂ ಏಕಕಾಲದಲ್ಲಿ ಅಥವಾ ಸ್ವಲ್ಪ ಹಿಂದುಮುಂದಾಗಿ ಪ್ರಯೋಗಿಸುವುದು ಈಚಿನ ರೂಢಿ. 

ಹಣದ ಮಾರುಕಟ್ಟೆ ಸುಸಂಘಟಿತವಾಗಿಲ್ಲದ ಮತ್ತು ಪ್ರತಿಭೂತಿಗಳು ಅಧಿಕವಾಗಿ ಇಲ್ಲದ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕಿನ ಈ ಎರಡು ಅಸ್ತ್ರಗಳೂ ಫಲಪ್ರದವಾಗುವುದು ಅಸಾಧ್ಯ. ಇತರ ದೇಶಗಳಲ್ಲೂ ಹಲವು ಸಂದರ್ಭಗಳಲ್ಲಿ ಇವು ಪರಿಣಾಮಕಾರಿಯಾಗಲಾರವು. ಆದರೂ ಅವು ಇಡೀ ಬ್ಯಾಂಕಿಂಗ್ ಕ್ಷೇತ್ರಕ್ಕೇ ಅನ್ವಯವಾಗುವಂಥವು. ಆದ್ದರಿಂದ ಕೇಂದ್ರೀಯ ಬ್ಯಾಂಕು ನೇರವಾಗಿ ಬ್ಯಾಂಕುಗಳ ನಗದು ಸಂಚಿತಿಗೇ ಕೈಹಾಕುವ ಕ್ರಮ ಈಚೆಗೆ ಜಾರಿಗೆ ಬಂದಿದೆ. ಪ್ರತಿಯೊಂದು ಬ್ಯಾಂಕೂ ತನ್ನ ಠೇವಣಿಯ ಗಾತ್ರದ ಮೇಲೆ ಕೇಂದ್ರೀಯ ಬ್ಯಾಂಕಿನಲ್ಲಿ ಇಡಬೇಕಾದ ನಗದು ಸಂಚಿತಿಯ ನಿಷ್ಪತ್ತಿಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. ಇದರಿಂದ ವಾಣಿಜ್ಯ ಬ್ಯಾಂಕುಗಳ ಉದ್ದರಿಯ ಮೇಲೆ ಅಗಾಧ ಪರಿಣಾಮವಾಗುತ್ತದೆ. ಉದಾಹರಣೆಗೆ, ಪ್ರತಿಯೊಂದು ಬ್ಯಾಂಕೂ ತಾನು ನೀಡುವ ಪ್ರತಿ ರೂ.100 ಠೇವಣಿಗೂ ರೂ.8ನ್ನು ನಗದು ಸಂಚಿತಿಯಾಗಿ ಇಡಬೇಕೆಂಬುದು ಪ್ರಕೃತ ನಿಯಮವಾಗಿದ್ದು, ಆ ಸಂಚಿತಿಯನ್ನು ರಿಸರ್ವ್ ಬ್ಯಾಂಕು (ಭಾರತೀಯ ಕೇಂದ್ರೀಯ ಬ್ಯಾಂಕು) ರೂ.10ಕ್ಕೆ ಏರಿಸಿದರೆ, ಆಗ ವಾಣಿಜ್ಯ ಬ್ಯಾಂಕು ರಿಸರ್ವ್ ಬ್ಯಾಂಕಿನಲ್ಲಿ ತನ್ನ ಸಂಚಿತಿಯನ್ನು ರೂ.2 ರಷ್ಟು ಹೆಚ್ಚಿಸಬೇಕು. ಇಲ್ಲವೇ ತನ್ನ ಠೇವಣಿಯನ್ನು ರೂ.80 ಕ್ಕೆ ಇಳಿಸಬೇಕು; ಆಗ ಅದರ ಉದ್ದರಿಯೂ ಇಳಿಯುತ್ತದೆ. ನಗದು ಸಂಚಿತಿಯ ನಿಷ್ಪತ್ತಿಯನ್ನು ಎಲ್ಲ ಬ್ಯಾಂಕುಗಳಿಗೂ ವ್ಯತ್ಯಾಸಗೊಳಿಸುವ ಬದಲು, ಯಾವ ಕ್ಷೇತ್ರದಲ್ಲಿ ಉದ್ದರಿಯ ಮೇಲೆ ಪರಿಣಾಮ ಬೀರಬೇಕೋ ಆ ಕ್ಷೇತ್ರದ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಮಾತ್ರ, ಒಂದೇ ಬ್ಯಾಂಕಿಗೆ ಕೂಡ, ಅದನ್ನು ವ್ಯತ್ಯಾಸಗೊಳಿಸಬಹುದು. ಕೇವಲ ಒಂದು ಆದೇಶದಿಂದ ಕೇಂದ್ರೀಯ ಬ್ಯಾಂಕು ಉದ್ದರಿ ಹತೋಟಿ ಸಾಧಿಸುವ ಉಪಾಯವಿದು. ಕೇಂದ್ರೀಯ ಬ್ಯಾಂಕಿಗೆ ಈ ಅಧಿಕಾರ ನೀಡುವ ಕಾನೂನುಗಳು ಅನೇಕ ದೇಶಗಳಲ್ಲಿ ಜಾರಿಗೆ ಬಂದಿವೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಅಸ್ತ್ರ ಕೂಡ ಪರಿಣಾಮಕಾರಿಯಾಗದೆ ಹೋಗುವ ಸಂಭವವುಂಟು. ಇಂಥ ದೇಶಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗೆ ನಡೆಯುವ ಹಣ ವ್ಯವಹಾರಗಳು ಅಧಿಕವಾಗಿರುವುದುಂಟು (ಉದಾ: ಭಾರತ). ಕೇಂದ್ರೀಯ ಬ್ಯಾಂಕಿನ ನಗದುಸಂಚಿತಿ ಆಜ್ಞೆ ಈ ವ್ಯವಹಾರಗಳಿಗೆ ಅನ್ವಯವಾಗುವುದಿಲ್ಲವಾದ್ದರಿಂದ ಇಡೀ ಹಣದ ಮಾರುಕಟ್ಟೆಯ ಮೇಲೆ ಬ್ಯಾಂಕಿನ ಆಜ್ಞೆ ಪರಿಣಾಮ ಸಾಧಿಸದೆ ಹೋಗುತ್ತದೆ.
ಮೇಲೆ ಹೇಳಿದ ಉದ್ದರಿ ನಿಯಂತ್ರಣಾಸ್ತ್ರಗಳು ಅರ್ಥವ್ಯವಸ್ಥೆಯ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಉಂಟುಮಾಡುವಂಥವು. ಆದರೆ ಉದ್ದರಿ ಬಳಸುವವರಲ್ಲಿ ಕೆಲವರ ಮೇಲೆ ಮಾತ್ರ ಪರಿಣಾಮಕಾರಿಯಾಗುವ ವಿಶಿಷ್ಟ ನಿಯಂತ್ರಣ ವಿಧಾನಗಳನ್ನೂ ಕೇಂದ್ರೀಯ ಬ್ಯಾಂಕುಗಳು ಪ್ರಯೋಗಿಸುತ್ತಿವೆ. ಅನಗತ್ಯವಾದ ಉದ್ದೇಶಗಳಿಗಾಗಿ ಉದ್ದರಿ ಬಳಸುವವರ ಮೇಲೆ ಮಾತ್ರ ನಿಯಂತ್ರಣ ವಿಧಿಸಬಹುದು. 1929ರಲ್ಲಿ ನ್ಯೂಯಾರ್ಕಿನ ಷೇರು ಪೇಟೆ ಕುಸಿದಾಗ, ಷೇರು ಮತ್ತು ಸ್ಟಾಕುಗಳ ಮೇಲೆ ಸಾಲ ಕೊಟ್ಟಿದ್ದ ಬ್ಯಾಂಕುಗಳು ಕಷ್ಟಕ್ಕೀಡಾದುವು. ಈ ಪ್ರತಿಭೂತಿಗಳ ಮೇಲೆ ಉದ್ದರಿ ನೀಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಅಲ್ಲಿಯ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆ ಒಂದು ಕ್ರಮವನ್ನು ಜಾರಿಗೆ ತಂದಿತು. ಇಂಥ ಪ್ರತಿಭೂತಿಗಳನ್ನು ಕೊಳ್ಳಲು ಬ್ಯಾಂಕಿನಿಂದ ಸಾಲ ಪಡೆಯಬಯಸುವವರು ಅದರ ಮೌಲ್ಯದ ಒಂದು ಗೊತ್ತಾದ ಭಾಗದ ಹಣವನ್ನು ತಾವೇ ಬೇರೆ ಮೂಲಗಳಿಂದ ತಂದುಕೊಳ್ಳಬೇಕು-ಎಂದು ವಿಧಿಸಲಾಯಿತು. ಉದಾಹರಣೆಗೆ, ಬ್ಯಾಂಕುಗಳು ಪ್ರತಿಭೂತಿಗಳ ಮೌಲ್ಯದ ಶೇಕಡ 60ಕ್ಕೆ ಮೀರದಷ್ಟು ಮಾತ್ರ ಸಾಲ ನೀಡಬಹುದೆಂದು ವಿಧಿಸಿದಾಗ ಉಳಿದ ಶೇಕಡಾ 40ರಷ್ಟು ಹಣವನ್ನು ಗ್ರಾಹಕ ಇಟ್ಟುಕೊಂಡಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಪ್ರತಿಭೂತಿಗಳನ್ನು ಕೊಳ್ಳಲು ಅವನು ಬ್ಯಾಂಕಿನಿಂದ ಸಾಲ ಪಡೆಯುವಂತಿಲ್ಲ. ದೇಶದಲ್ಲಿ ಅನುಭೋಗ ವಸ್ತುಗಳಿಗಾಗಿ ವಿಶೇಷವಾಗಿ ಸಾಲ ಪಡೆಯುವ ಪ್ರವೃತ್ತಿ ಇದ್ದು, ಇದರಿಂದ ಉಳಿತಾಯಕ್ಕೆ ಉತ್ತೇಜನ ಕಡಿಮೆಯಾಗಿ, ಬಂಡವಾಳ ವಸ್ತುಗಳ ಉತ್ಪಾದನೆ ತಗ್ಗುತ್ತಿದ್ದು, ಹಣದ ಉಬ್ಬರದ ಪರಿಸ್ಥಿತಿ ಇದ್ದಾಗ, ಅನುಭೋಗ ವಸ್ತುಗಳನ್ನು ಕೊಳ್ಳಲು ಬ್ಯಾಂಕುಗಳು ನೀಡುವ ಸಾಲದ ಮೇಲೆ ಕೇಂದ್ರೀಯ ಬ್ಯಾಂಕು ನಾನಾ ನಿರ್ಬಂಧಗಳನ್ನು ಹಾಕಬಹುದು. ಇದೂ ವಿಶಿಷ್ಟ ಉದ್ದರಿ ನಿಯಂತ್ರಣದ ಇನ್ನೊಂದು ಉದಾಹರಣೆ. ಕೇಂದ್ರೀಯ ಬ್ಯಾಂಕು ತನಗೆ ದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ವಾಣಿಜ್ಯ ಬ್ಯಾಂಕುಗಳಿಗೆ ನಿರ್ದೇಶನ ನೀಡುವುದೂ, ಅವಕ್ಕೆ ನೀಡುವ ಉದ್ದರಿ ನೆರವಿನ ಪಡಿತರ ಏರ್ಪಡಿಸುವುದೂ, ಬ್ಯಾಂಕುಗಳಿಗೆ ಸೂಕ್ತ ಸಲಹೆ ನೀಡುವುದೂ, ಕೇಂದ್ರೀಯ ಬ್ಯಾಂಕಿನ ಸೂಚನೆಗಳನ್ನು ಲಕ್ಷಿಸದೆ ಬ್ಯಾಂಕುಗಳ ಮೇಲೆ ನೇರ ಕ್ರಮ ಕೈಗೊಳ್ಳುವುದೂ ವಿಶಿಷ್ಟ ಉದ್ದರಿ ನಿಯಂತ್ರಣದ ಇತರ ವಿಧಾನಗಳು. ಆದರೆ ಇವುಗಳ ಪ್ರಯೋಗದಲ್ಲೂ ನಾನಾ ತೊಡಕುಗಳುಂಟು. ಇಂಥ ಕ್ರಮಗಳಿಂದ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಅಥವಾ ಅಧಿಕ ಪರಿಣಾಮಗಳಾಗುವ ಸಂಭವವುಂಟು. ವಾಣಿಜ್ಯ ಬ್ಯಾಂಕುಗಳ ವ್ಯವಹಾರದಲ್ಲಿ ಕೇಂದ್ರೀಯ ಬ್ಯಾಂಕು ಅತಿಯಾಗಿ ಕೈ ಹಾಕುವುದರಿಂದ ಅವುಗಳ ಸ್ವಾತಂತ್ರ್ಯ ಹರಣವಾಗಬಹುದು. 

ಕೇಂದ್ರೀಯ ಬ್ಯಾಂಕಿನ ಉದ್ದರಿ ನಿಯಂತ್ರಣ ಕ್ರಮಗಳ ಉದ್ದೇಶಗಳೇನು ಎಂಬುದು ಬಹಳ ವಾದಗ್ರಸ್ತವಾದ ಪ್ರಶ್ನೆ. ಹಣದ ಸ್ಥಿರತೆ, ವಿನಿಮಯ ದರದ ಸ್ಥಿರತೆ, ಬೆಲೆಗಳ ಸ್ಥಿರತೆ, ಪೂರ್ಣ ಉದ್ಯೋಗ, ಆರ್ಥಿಕ ಬೆಳವಣಿಗೆ-ಇವು ಉದ್ದರಿ ನಿಯಂತ್ರಣದಿಂದ ಸಾಧಿಸಬಯಸಬಹುದಾದ ಉದ್ದೇಶಗಳು.

	ಕೇಂದ್ರೀಯ ಬ್ಯಾಂಕಿಂಗಿನ ಪರಿಣಾಮಕತೆ : ಕೇಂದ್ರೀಯ ಬ್ಯಾಂಕು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ಅನೇಕ ಅನುಕೂಲ ಪರಿಸ್ಥಿತಿಗಳು ಇರುವುದು ಅವಶ್ಯ. ಅತ್ಯಂತ ಸೂಕ್ಷ್ಮವೇದಿಯಾದ ಹಣಪೇಟೆ ಇರುವ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕು ಹೆಚ್ಚು ಯಶಸ್ವಿಯಾಗಿ ಕೆಲಸ ಮಾಡಬಲ್ಲದು. ಅದರ ಮೂಲಕ ಕೇಂದ್ರೀಯ ಬ್ಯಾಂಕು ಇಡೀ ಆರ್ಥಿಕತೆಯ ಮೇಲೆ ಉದ್ದಿಷ್ಟ ಪರಿಣಾಮ ಉಂಟುಮಾಡಬಹುದು. ಹಣದ ಮಾರುಕಟ್ಟೆ ಸುಸಂಘಟಿತವಾಗಿದ್ದರೆ ಅದು ಕೇಂದ್ರೀಯ ಬ್ಯಾಂಕಿನ ಬಹಿರಂಗ ಮಾರುಕಟ್ಟೆ ವ್ಯವಹಾರಕ್ಕೂ ಅನುಕೂಲಕರ. ಹುಂಡಿಗಳ ಮಾರುಕಟ್ಟೆ ಇರುವುದೂ ಅವಶ್ಯ. ವಟಾವಣೆ ಪದ್ಧತಿ ಚೆನ್ನಾಗಿ ಬೆಳೆದಿದ್ದರೆ ಅದರ ಮೂಲಕ ಕೇಂದ್ರೀಯ ಬ್ಯಾಂಕು ದೇಶದ ಬಡ್ಡಿದರದ ಮೇಲೆ ಪ್ರಭಾವ ಬೀರಬಲ್ಲದು. ವಾಣಿಜ್ಯ ಬ್ಯಾಂಕುಗಳು ಕೂಡ ಸುವ್ಯವಸ್ಥಿತವಾಗಿ ಶಿಸ್ತಿನಿಂದ ನಡೆದುಕೊಳ್ಳುವಂತಿರುವುದು ಅವಶ್ಯ.

    ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಎಲ್ಲ ಅನುಕೂಲ ಪರಿಸ್ಥಿತಿಗಳೂ ಇರುವುದಿಲ್ಲ. [ಬಹುತೇಕ ರಾಷ್ಟ್ರಗಳಲ್ಲಿ ಅಸಂಘಟಿತ ಹಾಗೂ ಸಮಾನಾಂತರ ಆರ್ಥಿಕ ವ್ಯವಸ್ಥೆಯು ಆರಂಭವಾಗಿ ಪ್ರತಿಕೂಲ ಪರಿಸ್ಥಿತಿಯು ನಿರ್ಮಾಣವಾಗಿದೆ. ವಾಣಿಜ್ಯ ಬ್ಯಾಂಕುಗಳು ವ್ಯಾಪಕವಾಗಿ ಬೆಳೆದಿಲ್ಲದಿರುವುದು ಒಂದು ದೊಡ್ಡ ಕೊರತೆ. ಅವುಗಳ ಮೂಲಕ ಇಡೀ ದೇಶದ ಮೇಲೆ ಪರಿಣಾಮಕಾರಿಯಾಗುವಂಥ ಕ್ರಮಗಳನ್ನು ಕೇಂದ್ರೀಯ ಬ್ಯಾಂಕು ಕೈಗೊಳ್ಳಲಾಗುತ್ತಿಲ್ಲ. ಈ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಕೂಡ ಇತ್ತೀಚೆಗೆ ಜನ್ಮತಳೆದಿರುವುದರಿಂದ ಅವು ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಅಧಿಕಾರಯುತವಾಗಿ ವರ್ತಿಸುವುದು ಸಾಧ್ಯವಾಗಿಲ್ಲ. ಅನುಕೂಲವಾದ ಉದ್ದರಿ ಸಂಲೇಖಗಳು ಅಧಿಕ ಪರಿಮಾಣದಲ್ಲಿ ಇಲ್ಲದಿರುವುದರಿಂದ, ವಿವಿಧ ಬಗೆಯ ಉದ್ದರಿ ಸಂಲೇಖಗಳ ವಹಿವಾಟಿನಲ್ಲಿ ವಿಶೇಷ ಪ್ರಾವೀಣ್ಯ ಪಡೆದ ವ್ಯವಹಾರದಾರರೂ ಇಲ್ಲದಿರುವುದರಿಂದ, ಕೇಂದ್ರೀಯ ಬ್ಯಾಂಕಿಂಗಿನ ನೀತಿ ವ್ಯಾಪಕವಾದುದಾಗಿದೆ. ಹಣ ಮಾರುಕಟ್ಟೆ ಕೂಡ ಸುಸಂಘಟಿತವಾಗಿಲ್ಲದಿರುವುದು ಇನ್ನೊಂದು ಕೊರತೆ. ಆದರೂ ಈ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕುಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಶೇಷವಾದ ಪಾತ್ರ ವಹಿಸುತ್ತಿವೆ. (ನೋಡಿ- ಭಾರತೀಯ-ರಿಸರ್ವ್-ಬ್ಯಾಂಕ್)                  
                          
       (ಜಿ.ಟಿ.ಎಚ್.)
                                (ಪರಿಷ್ಕರಣೆ : ಜಿ.ಆರ್.ವಿ.; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ